Wednesday, February 18, 2009

ಮೋಹನ ಮುರಲಿ

ಗೋಪಾಲ ಕೃಷ್ಣ ಅಡಿಗರ ಜನ್ಮ ದಿನದಂದು, ಅವರ ಜನಪ್ರಿಯ ಕವಿತೆಗಳಲ್ಲಿ ಒಂದಾದ ಹಾಗೂ ನನಗೆ ಇಷ್ಟವಾದ ಕವನ...ಇಲ್ಲಿದೆ...


ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಕರೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋನ್ಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರಳದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ ?

ವಿವಶವಾಯಿತು ಪ್ರಾಣ ; ಹಾ! ಪರವಶವು ನಿನ್ನಿ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಡಿ ನಿನ್ನನು ?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು ?

7 comments:

ಮೂರ್ತಿ ಹೊಸಬಾಳೆ. said...

ಗೋ ಕೃ ಅಡಿಗರಿಗೆ ಜನ್ಮದಿನದ ಷುಭಾಷಯಗಳು.
ನೀವು,ನಾನೂ,ಎಂದಲ್ಲ ಕನ್ನಡ ಅರ್ಥವಾಗುವ ಎಲ್ಲರಿಗೂ ಈ ಕವನ ಇಷ್ಟವಾಗುತ್ತದೆ.
ಇಲ್ಲಿ ಅದನ್ನ ಸಮಯೋಚಿತವಾಗಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮ ಅನುಮತಿ ಇಲ್ಲದೇ ನಿಮ್ಮ ಬ್ಲೊಗನ್ನ ಹಿಂಬಾಲಿಸಿದ್ದಕ್ಕೆ ಕ್ಷಮೆ ಇರಲಿ.

ಮನಸ್ವಿ said...

ಗೋಪಾಲ ಕೃಷ್ಣ ಅಡಿಗರ ಜನ್ಮದಿನಕ್ಕೆ ಅವರ ಯಾವ ಮೋಹನ ಮುರಳಿ ಕರೆಯಿತು ಕವನದ ಪೂರ್ಣ ಪಾಠ ಹಾಕಿದ್ದಕ್ಕೆ ಧನ್ಯವಾದಗಳು..
ಜೊತೆಗೆ ಈ ಸಾಲುಗಳು ರಾಜು ಅನಂತ ಸ್ವಾಮಿಯ ಸಿರಿ ಕಂಠದಲ್ಲಿ ಅತ್ಯುತ್ತಮವಾಗಿ ಕೇಳುತ್ತಿತ್ತು.. ರಾಜು ಅನಂತ ಸ್ವಾಮಿಯನ್ನು ಕೂಡ ನೆನಪಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದ.

ಶಿವಪ್ರಕಾಶ್ said...

ಗೋಪಾಲ ಕೃಷ್ಣ ಅಡಿಗರಿಗೆ ಜನ್ಮದಿನದ ಶುಭಾಶಯಗಳು,
ಅವರ ಕವಿತೆಯನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು..

Ittigecement said...

ಸಿಂಚನಾ..

ಅರ್ಥ ಗರ್ಭಿತವಾದ ಹಾಡನ್ನು...
ಅಡಿಗರ ಜನ್ಮದಿನದಂದು ಹಾಕಿದ್ದಕ್ಕೆ

ಅಭಿನಂದನೆಗಳು...

ಅವರನ್ನು ನೆನಪಿಸಿದ್ದಕ್ಕೆ

ಧನ್ಯವಾದಗಳು...

Anonymous said...

ಸಿಂಚನ ,

ತುಂಬ ಒಳ್ಳೆಯ ಹಾಡು, ಒಂಟಿ ಇದ್ದಾಗ ತುಂಬ ಮನಸ್ಸಿಗೆ ಮುದ ನೀಡುವ ಹಾಡು, ನಾನು ಮದುವೆಯಾಗುವ ಮೊದಲು ಒಬ್ಬನೇ ಹಾಂಗ್ ಕಾಂಗ್ ನಲ್ಲಿದ್ದೆ. ಆಗ ಈ ಹಾಡನ್ನು ಕೇಳಿದಾಗಲೆಲ್ಲ ಕಣ್ಣಿನಲ್ಲಿ ನನಗರಿವಿಲ್ಲದೆ ಹನಿ ನೀರು ಉದುರುತಿತ್ತು. ತುಂಬ ಭಾವನಾತ್ಮಕವಾದ ಹಾಡು, ಅಡಿಗರಿಗೆ ಜನ್ಮ ದಿನದ ಶುಭಾಶಯಗಳು, ಪ್ರಕಟಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
ಗುರು

Radhika Nadahalli said...

@ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ
ಧನ್ಯವಾದಗಳು...

@ಮನಸ್ವಿ
ಧನ್ಯವಾದಗಳು...
ಹೌದು, "ಯಾವ ಮೋಹನ ಮುರಲಿ...." ಅಂದ ತಕ್ಷಣ ನೆನಪಿಗೆ ಬರದು ಅಮೇರಿಕಾ ಅಮೇರಿಕಾ ಚಿತ್ರದಲ್ಲಿ ರಾಜು ಅನಂತಸ್ವಾಮಿ ಹಾಡಿದ ಹಾಡು...

@ಶಿವಪ್ರಕಾಶ್
ಧನ್ಯವಾದಗಳು...

@ಪ್ರಕಾಶಣ್ಣ
ಧನ್ಯವಾದಗಳು...

@ ಗುರು
ಧನ್ಯವಾದಗಳು...
ಹೌದು, ಬಹಳ ಭಾವಪೂರಿತ ಕವನ...ಪ್ರತಿ ಬಾರಿ ಓದಿದಾಗಲೂ ಹೊಸ ಹೊಸ ಅರ್ಥ ಕೊಡುವ ಕವನ...

Ummi said...

ಮನಸ್ಸಿನಲ್ಲಿ, ಒಬ್ಬನೆ ಇದ್ದಾಗ ಕೆಲವೆಒಮ್ಮೆ ಜೋರಗಿ ಹಾಡಿ ಅನಂದಿಸುತ್ತಿದ್ದ ಹಾಡು ಓದಿ ತುಂಬ ಖುಷಿಯಾಗಿ, ಮತ್ತೆ ಮತ್ತೆ ಹಾಡುವ ತವಕ ಮಿಡಿಯಿತು. ಧನ್ಯವಾದಗಳು.

Powered By Blogger

Followers