Friday, April 3, 2009

ಶ್ರೀರಾಮ ನವಮಿಯ ದಿವಸ

ಶ್ರೀರಾಮ ನವಮಿಯ ದಿವಸ ಅಡಿಗರ "ಶ್ರೀರಾಮ ನವಮಿಯ ದಿವಸ" ಪದ್ಯ ಇಲ್ಲಿದೆ...ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು



ಶ್ರೀರಾಮ ನವಮಿಯ ದಿವಸ ರಾಮನಾಮಾಮೃತವೆ
ಪಾನಕ,ಪನಿವಾರ, ಕೋಸಂಬರಿ ;
ಕರಬೂಜ ಸಿದ್ದೋಟುಗಳ ಹೋಳು,ಸೀಕರಣೆ ;
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ ;

ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ -
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು :
ಮಣ್ಣೊಡೆದು ಹಸುರು ಹೂ ಹುಲ್ಲುಮುಳ್ಳು .

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ :
ಅಶ್ವಥ್ಥದ ವಿವರ್ತ ನಿತ್ಯ ಘಟನೆ ;
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯ ಕಾರಣದೊಂದಪೂರ್ವ ನಟನೆ .

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ ವಿಮಾನವನೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ,ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ .

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯಕೂರ್ಮವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ :

ಕೌಸಲ್ಯೆದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ
ಆಸ್ಫೋಟಿಸಿತ್ತು ಸಿಡಿತಲೆ ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟುನಿಂತ ಘಟನೆ ;

ಬೆಳ್ಳಂಬೆಳಕಿನಲ್ಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಗೆವ ರಾಜಹಂಸ ;
ಅಂತರಂಗದ ಸುರಳಿ ಬಿಚ್ಚಿ ಸರ್ಚ್ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ

ಸಂಕಲ್ಪದಿಂದ ಜಾಗರಣೆ ; ಕತ್ತಲಿನೆದೆಗ
ಕಣೆ;ದಂಡಕಾರಣ್ಯಕ್ಕೆ ಹಗಲ ದೊಣ್ಣೆ;

ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೆ ಮುಟ್ಟೆನೆ೦ಬುಡಾಫೆ

ವಿಜೃಂಭಿಸಿತು ರಾಮಬಾಣ ; ನಿಜ, ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ ;
ಕತ್ತರಿಸಿದರೆ ಬೆಳೆವ ; ಬೆಳೆದು ಕತ್ತಿಗೆ ಬರುವ
ಅನಾದಿ; ಕೋದ೦ಡ ದ೦ಡವೂ ಹೀಗೆ ದ೦ಡ ;

ಅಥವಾ ಚಕ್ರಾರಪ೦ಕ್ತಿ ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊ೦ಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕ೦ಪಿಸುತ್ತ .

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?

8 comments:

ಮನಸ್ವಿ said...

ನಿಂಗೂ ಸಹ ಶ್ರೀರಾಮ ನವಮಿಯ ಶುಭಾಶಯಗಳು, ಒಳ್ಳೆಯ ಪದ್ಯವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು...

Sandeepa said...

What font are you using here?
I can't read anything!

Radhika Nadahalli said...

oh i copied this from nudi and pasted here...so this problem...i will change the font soon...sorry for inconvenience...(atleast for this reason u commented on my blog :-) )

Madhava said...

have you read the greatest practical criticism on this poem by URA? its really nice... try reading it...

Radhika Nadahalli said...

oh...it is available in some book or...what...? give me some details about that...

Madhava said...

ಪದ್ಯ ಬಗೆವ ಬಗೆ: ಅಡಿಗರ 'ಶ್ರೀ ರಾಮನವಮಿಯ ದಿವಸ' ಅಂತ ಒಂದು ಲೇಖನ ಇದ್ದು. ಅದು ಅವರ ಪೂರ್ವಾಪರ ಪುಸ್ತಕದಲ್ಲಿ ಸಿಗ್ತು. ಓದಿ ನೋಡು.

ಮೃತ್ಯುಂಜಯ ಹೊಸಮನೆ said...

ಈ ಕವನವನ್ನು ಮತ್ತೊಮ್ಮೆ ಓದುವಂತೆ ಮಾಡಿದ್ದಕ್ಕೆ ಧನ್ಯವಾದಗಳು. ಅಲ್ಲಲ್ಲಿ ನುಸುಳಿರುವ ಕೆಲವು ತಪ್ಪುಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ.ಕ್ಷಮಿಸಿ. ಪದ್ಯದಲ್ಲಿ ಕೆಳಕಂಡ ತಿದ್ದುಪಡಿಗಳಾಗಬೇಕು.
೧. ಜೆಟ್ ವಿಮಾನವನೇರಿ...೨.ಪಡಿಮೂಡಿದಾಕೃತಿಗೆ...೩ಹುತ್ತಗಟ್ಟಿದ್ದ...೪.ಕೌಸಲ್ಯೆದಶರಥರ...
೫.ಗರಿಷ್ಠ...೬.ಕತ್ತಲಿನೆಡೆಗೆ ಅಲ್ಲ, ಕತ್ತಲಿನೆದೆಗೆ...೭.ಇದರ ಅನಂತರ ಒಂದು ಸಾಲಿದೆ:"ಕಣೆ;ದಂಡಕಾರಣ್ಯಕ್ಕೆ ಹಗಲ ದೊಣ್ಣೆ;" ೮.ವಿಜೃಂಭಿಸಿತು..೯. ಹತ್ತೆ ತಲೆ?..೧೦. ಪಾನಕ ಕುಡಿದು..ಇದರ ಅನಂತರ "ನೋನುತ್ತ" ಎಂಬ ಪದವಿದೆ....೧೧.ಪದ್ಯದ ಕೊನೆಯ ನಾಲ್ಕು ಸಾಲುಗಳು ಎಲ್ಲಿ? ಹೀಗಿದೆ:
"ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?"
(ತಿದ್ದುಪಡಿಗಳಿಗೆ ಆಧಾರ: ಗೋಪಾಲಕೃಷ್ಣ ಅಡಿಗರ ಆಯ್ದ ಕವನಗಳು. ಪ್ರಕಾಶಕರು: ಅಕ್ಷರ ಪ್ರಕಾಶನ,ಸಾಗರ. ೧.ನವೆಂಬರ್ ೧೯೬೮)

Radhika Nadahalli said...

ಧನ್ಯವಾದಗಳು... ಅಭಿಪ್ರಾಯಕ್ಕೂ ಹಾಗೂ ತಪನ್ನು ಗಮನಕ್ಕೆ ತಂದಿದ್ದಕ್ಕೂ...
ನಾನು ಈ ಪದ್ಯವನ್ನು "ಕೆ.ವಿ ಸುಬ್ಬಣ್ಣ ನೆನಪಿನ ಮೊದಲ ಓದು" ಪುಸ್ತಕ ಸರಣಿಯಲ್ಲಿನ, "ಗೋಪಾಲ ಕೃಷ್ಣ ಅಡಿಗರ ಆಯ್ದ ಪದ್ಯಗಳು" ಪುಸ್ತಕದಿಂದ ಆಯ್ದುಕೊಂಡಿದ್ದೆ...ತಪ್ಪುಗಳನ್ನು ತಿದ್ದುತ್ತೇನೆ...ಮತ್ತೊಮ್ಮೆ ತಪ್ಪು ತಿಳಿಯುವಂತೆ ಮಾಡಿದ್ದಕ್ಕೆ ಧನ್ಯವಾದಗಳು...ಸಲಹೆ ಸೂಚನೆಗಳಿಗೆ ಸದಾ ಸ್ವಾಗತ.
-ಇಂತಿ
ರಾಧಿಕಾ ನಡಹಳ್ಳಿ

Powered By Blogger

Followers