Friday, September 11, 2009

ಸ್ವಯಂ ಬೀಳ್ಕೊಡುಗೆ

ವಿದಾಯ...ಹಾಗೆ ಸಣ್ಣದೊಂದು ನೋವು
ಅಲ್ಲ ವಿದಾಯ ಸಣ್ಣದಾಗಿ ಕಾಣಿಸುವ
ಆದರೆ ಆಳ ಅಗಲ ತಿಳಿಯದ
ಅಳತೆ ಮಾಡಲಾಗದ ಅನು-ಭಾವ!
ಮುಂದಿನ ಭೇಟಿಯವರೆಗೂ
ಮನಸ ಆವರಿಸುವ,ಉರಿಸುವ
ನೆನಪ ಸ್ಫುರಿಸುವ
ಆಗಾಗ ತಳಮಳ ಬರಿಸುವ
ವಿ-ವರಿಸಲಾಗದ ಮೌನ ಸೃಷ್ಟಿಸುವ ಪರ್ವ ಈ ವಿದಾಯ...

Tuesday, April 21, 2009

ಹಾರದ ನಿರೀಕ್ಷೆ

ಸಿದ್ಧಪಡಿಸಿಕೊಂಡೆ ಸಡಗರದಿಂದ ಸುಂದರವಾದ ಪದಗಳ
ಮುತ್ತಿನಂತೆ ಪೋಣಿಸಿಟ್ಟುಕೊಂಡೆ

ತೊಡಿಸಿಕೊಳ್ಳಲು ಸಿಗುತ್ತಿಲ್ಲ ನಿನ್ನ ಕೊರಳು
ಅರ್ಥಾತ್ ನನ್ನಿಂದ ಸೃಷ್ಟಿಸಿಕೊಂಡ ಪದಗಳು
ನಿನ್ನ ಕರ್ಣಕ್ಕೆ ತಮ್ಮ ತಲುಪಿಸಿಕೊಳ್ಳಲು ಸಾಧ್ಯವಾಗದೇ;
ಸ್ವಕರುಣೆಯಿಂದ ಸೊರಗುತ್ತಿವೆ ತಮ್ಮಷ್ಟಕ್ಕೆ
ಅವೆಲ್ಲಾ ಕರಗಿ ಹೋಗುವ ಮುನ್ನ ಒಮ್ಮೆ ನೀನೆ ಕರುಣೆ ತೋರಬಾರದೇ...?

ನಿನ್ನ ಕೊರಳ ಮೌನದ ನಕಲಿ ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ ಅಸಲಿ ಮಾತಿನ ಮುತ್ತಿನ ಹಾರ

ಕರುಳಿಂದ ಬಂದ ಕೊರಗು, ನೆನಪಿಂದ ಬಂದ ನಲಿವು
ಹಾಗೂ ಇದರ ಅದಲು ಬದಲು ಎಲ್ಲ ಸೇರಿ ಹಾರವಾಗಿದೆ
ಭಾವಗಳೇ ಇದ ಪೋಣಿಸಲು ದಾರವಾಗಿದೆ...

ನಿನ್ನದೇ ಕೊರಳಿಗಾಗಿ ಕಾದುಕೊಂಡಿದೆ ಇನ್ನೂ ತಡಮಾಡಬೇಡ
ದಾರ ಲಡ್ಡಾದೀತೆಂಬ ಭಯ ಶುರುವಾಗಿದೆ!

ಆಭರಣ ಪೆಟ್ಟಿಗೆಯಲ್ಲಿ ಜತನದಿಂದಿರಿಸಿರುವೆ ಹಾರವ
ನಿನ್ನ ಕೊರಳೇ ತಮ್ಮ ಭದ್ರ ಸ್ಥಾನ ಎಂಬ ಭಾವದಲ್ಲಿ ಕಾದಿವೆ ಮಾನವ...

Friday, April 3, 2009

ಶ್ರೀರಾಮ ನವಮಿಯ ದಿವಸ

ಶ್ರೀರಾಮ ನವಮಿಯ ದಿವಸ ಅಡಿಗರ "ಶ್ರೀರಾಮ ನವಮಿಯ ದಿವಸ" ಪದ್ಯ ಇಲ್ಲಿದೆ...ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು



ಶ್ರೀರಾಮ ನವಮಿಯ ದಿವಸ ರಾಮನಾಮಾಮೃತವೆ
ಪಾನಕ,ಪನಿವಾರ, ಕೋಸಂಬರಿ ;
ಕರಬೂಜ ಸಿದ್ದೋಟುಗಳ ಹೋಳು,ಸೀಕರಣೆ ;
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ ;

ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ -
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು :
ಮಣ್ಣೊಡೆದು ಹಸುರು ಹೂ ಹುಲ್ಲುಮುಳ್ಳು .

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ :
ಅಶ್ವಥ್ಥದ ವಿವರ್ತ ನಿತ್ಯ ಘಟನೆ ;
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯ ಕಾರಣದೊಂದಪೂರ್ವ ನಟನೆ .

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ ವಿಮಾನವನೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ,ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ .

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯಕೂರ್ಮವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ :

ಕೌಸಲ್ಯೆದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ
ಆಸ್ಫೋಟಿಸಿತ್ತು ಸಿಡಿತಲೆ ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟುನಿಂತ ಘಟನೆ ;

ಬೆಳ್ಳಂಬೆಳಕಿನಲ್ಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಗೆವ ರಾಜಹಂಸ ;
ಅಂತರಂಗದ ಸುರಳಿ ಬಿಚ್ಚಿ ಸರ್ಚ್ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ

ಸಂಕಲ್ಪದಿಂದ ಜಾಗರಣೆ ; ಕತ್ತಲಿನೆದೆಗ
ಕಣೆ;ದಂಡಕಾರಣ್ಯಕ್ಕೆ ಹಗಲ ದೊಣ್ಣೆ;

ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೆ ಮುಟ್ಟೆನೆ೦ಬುಡಾಫೆ

ವಿಜೃಂಭಿಸಿತು ರಾಮಬಾಣ ; ನಿಜ, ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ ;
ಕತ್ತರಿಸಿದರೆ ಬೆಳೆವ ; ಬೆಳೆದು ಕತ್ತಿಗೆ ಬರುವ
ಅನಾದಿ; ಕೋದ೦ಡ ದ೦ಡವೂ ಹೀಗೆ ದ೦ಡ ;

ಅಥವಾ ಚಕ್ರಾರಪ೦ಕ್ತಿ ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊ೦ಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕ೦ಪಿಸುತ್ತ .

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?

Thursday, March 26, 2009

ನೆನಪಿನ ತುಣುಕುಗಳು...

ಯುಗಾದಿಯ ಸಮಯದಲ್ಲಿ ಒಂದು ಪೋಸ್ಟಿಂಗ್ ಮಾಡಣ ಅಂತ ಅನ್ನಿಸ್ತು, ಆದರೆ ಹೊಸ ಬರಹ ಏನಲ್ಲ ಎಲ್ಲೋ ಬರೆದಿಟ್ಟಿದ್ದ ಕೆಲವು ಸಾಲುಗಳನ್ನೇ ಇಲ್ಲಿ ಪ್ರಕಟಿಸುತ್ತಿದ್ದೇನೆ,ಪ್ರಕಟಿಸುವ ಉತ್ಸಾಹಕ್ಕಾಗಿ... :-)


*ಕರಿ ನೆರಳಿನಿಂದ ದೂರ ಸರಿದು ಹೊಸ ಬೆಳಕ ಕಣ್ಣಲಿ ತುಂಬಿಕೊಳ್ಳಲು
ಜೀವನದ ಕನಸ ಕನಸಿಸಲು ಕೂಡಿ ಬಂದ ಸಮಯ...

*ಕಳೆದ ಎಲ್ಲಾ ಕ್ಷಣಗಳ ಅದರಿಂದ ಗಳಿಸಿದ ನೆನಪ ಹರವಿ ಕುಂತಿರುವೆ ,ಇಂದಿಗೂ ಅದನ್ನು
ಜೀವಂತವಾಗಿರಿಸಲು ಉತ್ಸುಕಳಾಗಿರುವೆ,ಅದಕ್ಕಾಗಿ ಆಗಾಗ ನಿನ್ನ ಪ್ರತಿಕ್ರಿಯೆಯ ಬಯಸುತ್ತಿರುವೆ ...

*ಕಣ್ಣೊಳಗಿನ ಕನಸ ಕಣ್ಣ ಹೊಳಪಾಗಿಸು, ಬದುಕ ಬೆಳಕಾಗಿಸು
ಮನದೊಳಗಿನ ಪ್ರೀತಿಯ ಬದುಕ ಸ್ಫೂರ್ತಿಯಾಗಿಸು,ಜೀವನದ ಆದ್ಯತೆಯಾಗಿಸು...

*ಸೂರ್ಯರಶ್ಮಿ ಪ್ರಖರತೆ ಸಾಕೇ ಕಣ್ಣ ಪೊರೆ,
ತೆರೆಸಲು ಮನದ ಬಣ್ಣ ಅರಿಯಲು...
ಹಿತವಾದ ಎಲೆ ಬಿಸಿಲೋ ಅಥವಾ ಸುಡುವ ಬಿರು ಬಿಸಿಲೋ.....?
ಯಾವುದು ಚೆನ್ನ ನೀನೆ ಹೇಳು....

Sunday, March 1, 2009

ನಾಪತ್ತೆ-ಹೀಗೊಂದು ಪ್ರಕಟಣೆ!

ನಾನು ಬ್ಲಾಗ್ ಬರೆಯದೇ ತುಂಬ ದಿನವಾಯಿತು,ಬರೆಯಲು ಸಾಧ್ಯವಾಗಿಲ್ಲ ಎಂಬುದು ಕಾರಣ ಅಲ್ಲ,ಆದರೆ ಬರೆಯಲು ಶುರು ಮಾಡಿದ್ದನ್ನು ಪೂರ್ತಿ ಮಾಡಲು ಆಗಿಲ್ಲ...ಆದರೆ ಅಡಿಗರ ಜನ್ಮದಿನದ ಸಂದರ್ಭದಲ್ಲಿ ಅವರ ಕವನವನ್ನ ಇಲ್ಲಿ ಪ್ರಕಟಿಸಿದೆ...ಮೊದಲ ಕಾರಣ ಅವರ ಜನ್ಮದಿನ,ಎರಡನೆಯದು ನನ್ನ ಬ್ಲಾಗ್ ಅಪ್ಡೇಟ್ ಮಾಡುವುದು :-)

ಈಗಿನ ಬರಹದ ವಿಷಯ ಇದಲ್ಲ,ಆದರೂ ವಿಷಯ ಪ್ರಸ್ತಾಪ ಮಾಡಿದ್ದೇನೆ ಅಷ್ಟೆ...

ವಿಷಯ ಏನಪ್ಪಾ ಅಂದರೆ ನಾನು ಬ್ಲಾಗ್ ಪ್ರಾರಂಭ ಮಾಡಿ ಹತ್ರ ಹತ್ರ ೩ ತಿಂಗಳು ಆಗ್ತಾ ಬಂತು,ಈ ಅವಧಿಯಲ್ಲಿ ನನ್ನ ಬ್ಲಾಗ್ ಹಿಮ್ಬಾಲಿಸುವವರ ಸಂಖ್ಯೆ ೭ಕ್ಕೆ ತಲುಪಿದೆ...ಇದು ನನಗಂತೂ ಖುಷಿಯ ವಿಷಯ :-)
೧ರಿನ್ದ ಆರಂಭವಾದ ಹಿಂಬಾಲಕರ ಅಂಕಿ ಮೊನ್ನೆ ೭ಕ್ಕೆ ತಲುಪಿದಾಗ ನನಗೆ ಸಂತಸ ಆಗಿದ್ದು ಸುಳ್ಳಲ್ಲ...ಆದರೆ ನೆನ್ನೆ ನೋಡ್ತೀನಿ ಹಿಂಬಾಲಕರೆಲ್ಲ ನಾಪತ್ತೆ!! ಮತ್ತೊಮ್ಮೆ ಪರಿಶೀಲನೆ ಮಾಡಿದೆ,ಬಹುಶ ನಾನೇ ಸರಿಯಾಗಿ ನೋಡಿಲ್ಲವೇನೋ ಎಂದು,ಉಹು ಇಲ್ಲ ಎಲ್ಲೂ ಹಿಂಬಾಲಕರು ಕಾಣುತ್ತಿಲ್ಲ :(

ಇದು ಹೇಗಾಯಿತು ಯಾಕಾಯಿತು ನನಗೆ ಅರ್ಥವಾಗುತ್ತಿಲ್ಲ,ಒಟ್ಟಿನಲ್ಲಿ ಇದೊಂದು ನಿಗೂಢದಂತೆ ಭಾಸವಾಗುತ್ತಿದೆ!!
ತಾಂತ್ರಿಕ ದೋಷವಿರಬಹುದು...

ಇದನ್ನು ಓದಿದವರಲ್ಲಿ ಈ ಹಿಂದೆ ನನ್ನ ಬ್ಲಾಗ್ನ ಹಿಂಬಾಲಕರಾಗಿದ್ದವರು ಇದ್ದರೆ ,ಪುನಃ ಹಿಂಬಾಲಕರಾಗಬಹುದು...ಆಗದಿದ್ದವಾರು ಇನ್ನು ಮುಂದೆ ಇಷ್ಟವಾದರೆ ಆಗಬಹುದು.

-ಇಂತಿ ಸಿಂಚನ

Wednesday, February 18, 2009

ಮೋಹನ ಮುರಲಿ

ಗೋಪಾಲ ಕೃಷ್ಣ ಅಡಿಗರ ಜನ್ಮ ದಿನದಂದು, ಅವರ ಜನಪ್ರಿಯ ಕವಿತೆಗಳಲ್ಲಿ ಒಂದಾದ ಹಾಗೂ ನನಗೆ ಇಷ್ಟವಾದ ಕವನ...ಇಲ್ಲಿದೆ...


ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಕರೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋನ್ಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರಳದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ ?

ವಿವಶವಾಯಿತು ಪ್ರಾಣ ; ಹಾ! ಪರವಶವು ನಿನ್ನಿ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಡಿ ನಿನ್ನನು ?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು ?

Friday, January 9, 2009

ಸಮ್ಮೋಹನ

ನಾ ಅಂದು ಬರೆದ ಪ್ರತಿಯೊಂದು ಪದಕ್ಕೂ,
ಇಂದು, ಮುಂದು, ಎಂದೆಂದೂ ಬರೆಯುವ ಪ್ರತಿ ಪದಕ್ಕೂ ನೀನೆ ಕಾರಣ.
ನನ್ನ ನಿರೀಕ್ಷೆಯ ನಿಧಿಯ ನನಸಾಗಿಸಿದ ನೀನೆ,
ನನ್ನಲ್ಲಿ ಮೂಡುವ ಭಾವಗಳ, ಅಕ್ಷರಗಳಾಗಿಸುವ ಕ್ರಿಯೆಯ ಮೂಲ ಪ್ರೇರಣ.
ಬರೆಯಬೇಕೆನಿಸುವ ಭಾವಗಳ ಮನದೊಳಗೆ ಬಿತ್ತಿದ ಬೆಳೆಗಾರ,
ಕನಸಿಸಲು ಅದ ಕಾವ್ಯವಾಗಿಸಲು ತನ್ಮೂಲಕ,
ತರಬೇತಿಯಿಲ್ಲದೆ ಮನದ ತಳದಲ್ಲೇ ಉಳಿದುಹೋಗುತ್ತಿದ್ದ ಭಾವ ತಿಲ್ಲಾನಗಳ
ಗೆಜ್ಜೆಕಟ್ಟಿ ರಂಗದ ಮೇಲೆ ಕುಣಿಸಲು ಕಲಿಸಿದ ಕಲೆಗಾರ...
Powered By Blogger

Followers