Wednesday, February 18, 2009

ಮೋಹನ ಮುರಲಿ

ಗೋಪಾಲ ಕೃಷ್ಣ ಅಡಿಗರ ಜನ್ಮ ದಿನದಂದು, ಅವರ ಜನಪ್ರಿಯ ಕವಿತೆಗಳಲ್ಲಿ ಒಂದಾದ ಹಾಗೂ ನನಗೆ ಇಷ್ಟವಾದ ಕವನ...ಇಲ್ಲಿದೆ...


ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಕರೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋನ್ಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರಳದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ ?

ವಿವಶವಾಯಿತು ಪ್ರಾಣ ; ಹಾ! ಪರವಶವು ನಿನ್ನಿ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಡಿ ನಿನ್ನನು ?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು ?
Powered By Blogger

Followers