Thursday, November 14, 2013

ವೃತ್ತಾಂತ 


ಮುತ್ತುವ ಮುಂದಾಲೋಚನೆಗಳಲಿ
ಮಾತ್ರ ಮಾಯುವ ದುಮ್ಮಾನಗಳು

ಗೋಗರಿಕೆಯ ಗದ್ದಲಕೆ
ದೀರ್ಘ ನೀರವದ
ಸಮಾಧಾನ

ಅಸ್ಥಿರಗಳ ಅರಿವು ಮೀಟುವ
ಅಪರಾವತಾರ
ಗಳಲಿ ಎದುರಾಗುವ ಸಂಜ್ಞೆ



ಕಲೆವ ಕಾಲಕ್ಕೆ ಕಾಯುವ
ಆಟದಲೆ ಕಟ್ಟಿಕೊಳುವ
ಕ್ಷಣಗಳ ಸಾತತ್ಯ

ಉಕ್ಕುವಕ್ಕರೆಯಲಿ ಬಣ್ಣಿಸಿ
ಕರೆವ ನೋಟಕ್ಕೆ ನಿಲುಕು
ಹೇಳದ್ದೆಲ್ಲಾ ಅರಿವಾಗುವ
ಆ ಲೋಕವೇ ನೆಚ್ಚು



ತಬ್ಬಲಿ ನನ್ನ ಇರುಳು
ನೀರವದಲ್ಲಿ ಶಬ್ದಗಳು
ಸಂತೈಸುವ ತೀವ್ರ ಮುದ್ದು
ಭಾವಗಳ ಚಕಿತ ಚಿತ್ರಣ

ತುಡಿವ ಭಾವವೊಂದು ಜೀವ
ತಣಿಸುತ
ಒಳಗೊಳಗೇ ನಮ್ಮ ಮಣಿಸುವಾಗ
ಮಿನುಗು ಕಾಂತಿಯೊಂದರ ವಿನಿಮಯ

ಒತ್ತು, ಕೊಂಬು, ತಲೆಗಟ್ಟು -
ದೀರ್ಘ .....
ದೊಡ್ಡ ಬಳಗದ ಕವಿತೆ
ನಿನ್ನ ಒಡನಾಟ ನಿರುಮ್ಮಳ

- ರಾಧಿಕಾ ನಡಹಳ್ಳಿ 

(ಹೊಸದಿಗಂತ ೨೦೧೩ರ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟ)

Friday, February 18, 2011

ಎಂದು ಕೊನೆ

          ಅಡಿಗರ ಜನ್ಮದಿನದಂದು ಅವರ ಈ ಕವನ...


               ಎಂದು ಕೊನೆ  ? - ಹಾ - ಎಂದು ಕೊನೆ? 
 ಒಬ್ಬರನೊಬ್ಬರು  ಕೊಂದು ಕಳೆವ ಕೊಲೆ 
 ಹಬ್ಬಕೆ ತಾ ಬರದೇನು ಕೊನೆ?
 ಎಂದು ಕೊನೆ? - ಓ - ಎಂದು ಕೊನೆ ?

               ಯುಗಯುಗದಿಂದಲು ಬಗೆಬಗೆಯಿಂದಲು
 ನಗುವಿನೊಳೂ ಯಾತನೆಯೊಳಗೂ
 ನರನೆದೆಯಾಳವನಳಲಿಪ  ಅಳುಕಿದು ;
 'ಬರದೆ ಕೊನೆ ? - ಇದ -  ಕಿರದೆ ಕೊನೆ !'
   
               ಎನಿಬರೊ ನರವರರೆದ್ದು ಬಂದು ಕಡೆ 
  ಕಡೆದರು ನರನೆದೆಯ;
  ಹಾಲಾಹಲವೇ ಹರಿಯಿತು, ಮೊರೆಯಿತು ;
  ಬಾರದೇನೊ ಅಮೃತ  - ಎಂದಿಗೂ -
  ಬಾರದೇನೋ ಅಮೃತ ?

              ಮುಗಿಲಲಿ ಮೂಡಿದ ಒಲವಿನ ಕನಸು
  ಮನಸಿಗಿಳಿಯಲಿಲ್ಲ - ಇಳಿದರು -  
  ನನಸನಾಳದಲ್ಲ !
  ಅರಿವಿಗೂ ಇರಿವಿಗು ಇರುವೀ ಅಂತರ 
  ಕಳೆಯಲಾರದೇನೋ  - ಎಂದಿಗು -
  ಅಳಿಯಲಾರದೇನೋ !

              ಎದೆಗು ಎದೆಗು ನಡುವಿದೆ ಹಿರಿಗಡಲು ; 
  ಮುಟ್ಟಲಾರೆವೇನೋ - ಸೇತುವೆ -
  ಕಟ್ಟಲಾರೆವೇನೋ ! 
  ನಡುವಿನ ತೆರೆಗಳ ಮೊರೆಹವೆ ಮಾನವ
  ಜೀವಗಾನವೇನೋ -  ದೇವನ - 
  ದಿವ್ಯಗಾನವೇನೋ !

              ಒಬ್ಬರನೊಬ್ಬರು ನಂಬುವ ತುಂಬುವ
   ಹಬ್ಬವು ಕಬ್ಬದ ಕಾದಂಬಿನಿಯಲಿ 
   ಮೂಡುವ ಮಸುಳುವ ಮಳೆಬಿಲ್ಲಾಯಿತೆ ?
   ಮೊಳೆಯದೆ ಅದು ಎದೆಯಾಳದಲಿ ? 
   ಬೆಳೆಯದೆ ಅದು ನಮ್ಮೀ ಬಾಳಿನಲಿ ?
  
              ತಿಳಿಯುವ  ಹೃದಯದ ಈ ತಳಮಳಕೆ ,
   ಬೆಳೆಯುವ ಬುದ್ಧಿಯ ಈ ಕಳವಳಕೆ ,
   ಬಲಿಯುವ ನರಕುಲದೀ ಒಳ ರೋಗಕೆ
              ಎಂದು ಕೊನೆ  ? - ಹಾ - ಎಂದು ಕೊನೆ ?
              ಒಬ್ಬರನೊಬ್ಬರು ಕೊಂದು ಕಳೆವ ಕೊಲೆ
   ಹಬ್ಬಕೆ ತಾ ಇರದೇನು ಕೊನೆ ? 
   ಎಂದು ಕೊನೆ ? - ಹಾ - ಎಂದು ಕೊನೆ ?

                       
  





 

Tuesday, January 25, 2011

ಗಡಿ-ಬಿಡಿ

ಸ್ವಲ್ಪ ಗಡಿಬಿಡಿ ನಿನಗೆ
ಎಂದು ದೂರು
ಊರ ಗಡಿ ದಾಟಿ ಬಂದ ಬಾಲ್ಯ
ಅರಿವಿದೆ ಗಡಿಯ ಬಗ್ಗೆ
ಗಡಿ ದಾಖಲೆಯಲ್ಲಿ- ಒಂದು ರೇಖೆ
ಆಚೊಂದು ಈಚೊಂದು
ಬೇರೆ ತೆರನಾದ ಹೆಸರಷ್ಟೇ
ಮತ್ತೆಲ್ಲ ಒಂದೇ ಸೂರ್ಯ ಅದೇ ಚಂದ್ರ
ಮೂಡು ಮುಳುಗು ಸಮಯ ಬದಲು
ಆಚಾರ ಸಂಸ್ಕೃತಿ ಆಹಾರ ಪದ್ಧತಿ
ಅಷ್ಟಿಷ್ಟು ಆಚೀಚೆ ತಲ್ಲಣವೆಂದರೆ ಅದೊಂದೇ
ಗಡಿಯ ಭೇದವಿಲ್ಲ
ಭಾವ ಬೇರೆಯಲ್ಲ ಭಾಷೆಯಂತೆ
ಹೌದು ಒಂದು ಗಡಿಯೊಳಗ ವಿಷಯ
ಬರೆಯ ಹೊರಟು ಅದರ ಗಡಿ ದಾಟಿದೆ
ಮನಸಿಗಾವ ಗಡಿ ರೇಖೆ ಎಳೆವ ಸಾಧನ
ಸೃಷ್ಟಿಯಲ್ಲುಂಟೇ?

ಅದು ಗಡಿಬಿಡಿಯಲ್ಲವೋ 
ತೊರೆದ ಗಡಿಯ ಬಿಡದೇ
ಕಾಡುವ ನೆನಪ ಜೊತೆ
ಪ್ರಸ್ತುತದೊಟ್ಟಿಗಿನ ಸೆಣಸಾಟ
ಪಾಲಿಸಿದ ಅನಾಯಾಸ ಬೇಡದೇ
ಪಡೆದ ಶಾಪದ ವರವದು
ಬಹಳ ಹೆಚ್ಚೆನಿಸಿತೋ ಈ ಪ್ರವರ
ಇಲ್ಲಾ ಮೆಚ್ಚಿತೋ

(ಇಂದಿನ ಹೊಸದಿಗಂತದಲ್ಲಿ ಪ್ರಕಟವಾದ ಕವನ) 

Monday, November 1, 2010

ನಾನು


  ಕನ್ನಡ ರಾಜ್ಯೋತ್ಸವದಂದು ಎಲ್ಲ ಕನ್ನಡದ ಮನಸ್ಸುಗಳಿಗೆ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ಪ್ರೀತಿ ಕೇವಲ ಈ ದಿನಕ್ಕೆ ಮಾತ್ರ ಸೀಮಿತವಾಗಿರದೆ ಸದಾಕಾಲ ಪಸರಿಸುತಿರಲಿ.

೧ 
ವಿಶ್ವ ಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು !
ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟ 
ನಿಂತಂಥ ಮೂರ್ತಿ ನಾನು !

 ೨
 ಭಾರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು !
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು !

೩ 
 ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು !
ಈ  ಐದು ಐದೆಯರ ಪಂಚಪ್ರಾಣಗಳಾಗಿ 
ಈ ಜೀವ ದೇಹನಿಹನು !

 ೪
ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತ ನರನು !
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ 
ಅಂಬಿಕಾತನಯನಿವನು !  


                                        - ದ. ರಾ. ಬೇಂದ್ರೆ












Friday, August 20, 2010

ಬೇರಿನ ಭದ್ರತೆ

ಸ್ವಂತವಲ್ಲದ ಪರಿಸರದಲ್ಲಿ ಸೌಹಾರ್ದಯುತ ಸಂಬಂಧಗಳ ಬಯಸಿ,
ಮನದ ತುಂಬೆಲ್ಲ ಅದರ ಸೌಗ೦ಧವ ಕಲ್ಪಿಸಿ,
ಕೊನೆಗದು ಕೇವಲ ಕಲ್ಪನೆಯೆಂದು ಅನಿಸಿ,
ಭಾವಬಿ೦ದುಗಳ ಜೋಡಿಸುವ ಹಂಬಲದಲ್ಲಿ
ಜೀವದ ಬೇರನ್ನು  ಅರಸಿ,
ಹೋದೆ ನಾನು ಮತ್ತದೇ ಬಯಕೆಯಲ್ಲಿ...

ಅಂತೂ ಸೌಹಾರ್ದಯುತ ಸಂಬಂಧಗಳ ಕೊಂಡಿ ಸಿಕ್ಕಿತು,.
ಅದೂ ಜೀವದ ಬೇರಿನ ಬುಡದಲ್ಲಿ...
ಕಲ್ಪನೆ, ಅದು ಕಲ್ಪನೆಯಾಗಿ ಉಳಿದಿಲ್ಲ ವಾಸ್ತವತೆಯೊಟ್ಟಿಗೆ ಮಿಳಿತಗೊ೦ಡಿದೆ
 ಭಾವ ಬಿಂದುಗಳ
ಜೋಡಣೆಯ ಕಾರ್ಯದಲಿ ಮಗ್ನಳಾಗಿ ಮನ ಪುಳಕಗೊಂಡಿದೆ ....

Thursday, April 1, 2010

ವಿಮೋಚನೆ

ಬಣ್ಣಗಳನು ನೋಡುವ ಹಂಬಲವಿತ್ತು ನನ್ನಲ್ಲಿ,
ಆದರೆ ಕಣ್ಣಿಗೆ ಪೊರೆ ಬಂದು
ಅವಕಾಶವಂಚಿತಳಾಗಿದ್ದೆ.
ಪೊರೆಯನು ತೆಗೆಯಲು ಕಾತುರಳಾಗಿದ್ದೆ
ಸಹಾಯ ಹಸ್ತಕಾಗಿ ಕಾಯುತಾ
ಆಶಾವಾದಿಯಾಗಿದ್ದೆ.
ಕೊನೆಗೂ ನನ್ನ ನಿರೀಕ್ಷೆ ಫಲಿಸಿತು:
ಆ ಅಮೃತ ಹಸ್ತ ಬಂದು ನನಗೊದಗಿದ್ದ
ತಾತ್ಕಾಲಿಕ ಪೊರೆಯನು
ಶಾಶ್ವತವಾಗಿ ನಾಶ ಮಾಡಿ ಬಣ್ಣದ ಲೋಕಕ್ಕೆ ಕರೆದೊಯ್ಯಿತು.
ಇಂತಹ ಸುಯೋಗವನು ನನ್ನ ಪಾಲಿಗೆ
ಹೊತ್ತು ತಂದ ಆ ಹೃದಯ
ಎಂದಿಗೂ ನನಗೆ ವಿಸ್ಮಯದ ಬಣ್ಣದ
ಲೋಕ...

( ಈ ವಾರದ ಮಣ್ಣಿನ ವಾಸನೆಯಲ್ಲಿ ಪ್ರಕಟವಾದ ಕವನ)

Friday, September 11, 2009

ಸ್ವಯಂ ಬೀಳ್ಕೊಡುಗೆ

ವಿದಾಯ...ಹಾಗೆ ಸಣ್ಣದೊಂದು ನೋವು
ಅಲ್ಲ ವಿದಾಯ ಸಣ್ಣದಾಗಿ ಕಾಣಿಸುವ
ಆದರೆ ಆಳ ಅಗಲ ತಿಳಿಯದ
ಅಳತೆ ಮಾಡಲಾಗದ ಅನು-ಭಾವ!
ಮುಂದಿನ ಭೇಟಿಯವರೆಗೂ
ಮನಸ ಆವರಿಸುವ,ಉರಿಸುವ
ನೆನಪ ಸ್ಫುರಿಸುವ
ಆಗಾಗ ತಳಮಳ ಬರಿಸುವ
ವಿ-ವರಿಸಲಾಗದ ಮೌನ ಸೃಷ್ಟಿಸುವ ಪರ್ವ ಈ ವಿದಾಯ...

Tuesday, April 21, 2009

ಹಾರದ ನಿರೀಕ್ಷೆ

ಸಿದ್ಧಪಡಿಸಿಕೊಂಡೆ ಸಡಗರದಿಂದ ಸುಂದರವಾದ ಪದಗಳ
ಮುತ್ತಿನಂತೆ ಪೋಣಿಸಿಟ್ಟುಕೊಂಡೆ

ತೊಡಿಸಿಕೊಳ್ಳಲು ಸಿಗುತ್ತಿಲ್ಲ ನಿನ್ನ ಕೊರಳು
ಅರ್ಥಾತ್ ನನ್ನಿಂದ ಸೃಷ್ಟಿಸಿಕೊಂಡ ಪದಗಳು
ನಿನ್ನ ಕರ್ಣಕ್ಕೆ ತಮ್ಮ ತಲುಪಿಸಿಕೊಳ್ಳಲು ಸಾಧ್ಯವಾಗದೇ;
ಸ್ವಕರುಣೆಯಿಂದ ಸೊರಗುತ್ತಿವೆ ತಮ್ಮಷ್ಟಕ್ಕೆ
ಅವೆಲ್ಲಾ ಕರಗಿ ಹೋಗುವ ಮುನ್ನ ಒಮ್ಮೆ ನೀನೆ ಕರುಣೆ ತೋರಬಾರದೇ...?

ನಿನ್ನ ಕೊರಳ ಮೌನದ ನಕಲಿ ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ ಅಸಲಿ ಮಾತಿನ ಮುತ್ತಿನ ಹಾರ

ಕರುಳಿಂದ ಬಂದ ಕೊರಗು, ನೆನಪಿಂದ ಬಂದ ನಲಿವು
ಹಾಗೂ ಇದರ ಅದಲು ಬದಲು ಎಲ್ಲ ಸೇರಿ ಹಾರವಾಗಿದೆ
ಭಾವಗಳೇ ಇದ ಪೋಣಿಸಲು ದಾರವಾಗಿದೆ...

ನಿನ್ನದೇ ಕೊರಳಿಗಾಗಿ ಕಾದುಕೊಂಡಿದೆ ಇನ್ನೂ ತಡಮಾಡಬೇಡ
ದಾರ ಲಡ್ಡಾದೀತೆಂಬ ಭಯ ಶುರುವಾಗಿದೆ!

ಆಭರಣ ಪೆಟ್ಟಿಗೆಯಲ್ಲಿ ಜತನದಿಂದಿರಿಸಿರುವೆ ಹಾರವ
ನಿನ್ನ ಕೊರಳೇ ತಮ್ಮ ಭದ್ರ ಸ್ಥಾನ ಎಂಬ ಭಾವದಲ್ಲಿ ಕಾದಿವೆ ಮಾನವ...

Friday, April 3, 2009

ಶ್ರೀರಾಮ ನವಮಿಯ ದಿವಸ

ಶ್ರೀರಾಮ ನವಮಿಯ ದಿವಸ ಅಡಿಗರ "ಶ್ರೀರಾಮ ನವಮಿಯ ದಿವಸ" ಪದ್ಯ ಇಲ್ಲಿದೆ...ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು



ಶ್ರೀರಾಮ ನವಮಿಯ ದಿವಸ ರಾಮನಾಮಾಮೃತವೆ
ಪಾನಕ,ಪನಿವಾರ, ಕೋಸಂಬರಿ ;
ಕರಬೂಜ ಸಿದ್ದೋಟುಗಳ ಹೋಳು,ಸೀಕರಣೆ ;
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ ;

ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ -
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು :
ಮಣ್ಣೊಡೆದು ಹಸುರು ಹೂ ಹುಲ್ಲುಮುಳ್ಳು .

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ :
ಅಶ್ವಥ್ಥದ ವಿವರ್ತ ನಿತ್ಯ ಘಟನೆ ;
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯ ಕಾರಣದೊಂದಪೂರ್ವ ನಟನೆ .

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ ವಿಮಾನವನೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ,ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ .

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯಕೂರ್ಮವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ :

ಕೌಸಲ್ಯೆದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ
ಆಸ್ಫೋಟಿಸಿತ್ತು ಸಿಡಿತಲೆ ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟುನಿಂತ ಘಟನೆ ;

ಬೆಳ್ಳಂಬೆಳಕಿನಲ್ಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಗೆವ ರಾಜಹಂಸ ;
ಅಂತರಂಗದ ಸುರಳಿ ಬಿಚ್ಚಿ ಸರ್ಚ್ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ

ಸಂಕಲ್ಪದಿಂದ ಜಾಗರಣೆ ; ಕತ್ತಲಿನೆದೆಗ
ಕಣೆ;ದಂಡಕಾರಣ್ಯಕ್ಕೆ ಹಗಲ ದೊಣ್ಣೆ;

ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೆ ಮುಟ್ಟೆನೆ೦ಬುಡಾಫೆ

ವಿಜೃಂಭಿಸಿತು ರಾಮಬಾಣ ; ನಿಜ, ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ ;
ಕತ್ತರಿಸಿದರೆ ಬೆಳೆವ ; ಬೆಳೆದು ಕತ್ತಿಗೆ ಬರುವ
ಅನಾದಿ; ಕೋದ೦ಡ ದ೦ಡವೂ ಹೀಗೆ ದ೦ಡ ;

ಅಥವಾ ಚಕ್ರಾರಪ೦ಕ್ತಿ ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊ೦ಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕ೦ಪಿಸುತ್ತ .

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?
Powered By Blogger

Followers